Psalms 30

ಅಪಾಯದಿಂದ ತಪ್ಪಿಸಲ್ಪಟ್ಟವರು ಯೆಹೋವನನ್ನು ಕೊಂಡಾಡುವುದು

ದಾವೀದನ ಕೀರ್ತನೆ, ದೇವಾಲಯದ ಪ್ರತಿಷ್ಠೆಯಲ್ಲಿ ಹಾಡತಕ್ಕದ್ದು.

(ಕೀರ್ತ. 6; ಯೋಹಾ. 10:22)

1ಯೆಹೋವನೇ, ನನ್ನ ಶತ್ರುಗಳು ಸಂತೋಷಿಸುವುದಕ್ಕೆ ಅವಕಾಶಕೊಡದೆ,
ನನ್ನನ್ನು ಉದ್ಧರಿಸಿದ್ದರಿಂದ ನಿನ್ನನ್ನು ಕೊಂಡಾಡುವೆನು.
2 ಯೆಹೋವನೇ, ನನ್ನ ದೇವರೇ,
ನಿನಗೆ ಮೊರೆಯಿಡಲು ನನ್ನನ್ನು ಸ್ವಸ್ಥಮಾಡಿದಿ.
3 ಯೆಹೋವನೇ, ನನ್ನ ಪ್ರಾಣವನ್ನು ಪಾತಾಳದಿಂದಲೂ ಎತ್ತಿದಿಯಲ್ಲಾ;
ನನ್ನನ್ನು ಸಮಾಧಿಯಲ್ಲಿ ಸೇರಿಸದೆ ಬದುಕಿಸಿದಿಯಲ್ಲಾ.

4

ಯೆಹೋವನ ಭಕ್ತರೇ, ಆತನನ್ನು ಕೀರ್ತಿಸಿರಿ;

ಆತನ ಪರಿಶುದ್ಧನಾಮವನ್ನು ಕೊಂಡಾಡಿರಿ.
5 ಆತನ ಕೋಪವು ಕ್ಷಣಮಾತ್ರವೇ;
ಆತನ ಅನುಗ್ರಹವೋ ಜೀವಮಾನವೆಲ್ಲಾ ಇರುವುದು;
ಸಂಜೆಗೆ ದುಃಖವೆಂಬುದು ಬಂದು ನಮ್ಮ ಬಳಿಯಲ್ಲಿ ಇಳಿದುಕೊಂಡರೂ,
ಮುಂಜಾನೆ ಹರ್ಷಧ್ವನಿಯು ಕೇಳಿಸುವುದು.

6

ನಾನಂತೂ ಸುಖದಿಂದಿದ್ದಾಗ, <<ನಾನು ಎಂದಿಗೂ ಕದಲುವುದಿಲ್ಲ>>

ಎಂದು ಹೇಳಿಕೊಂಡಿದ್ದೆನು.
7 ಯೆಹೋವನೇ, ಕೃಪೆಮಾಡಿ ನಾನಿರುವ ಬೆಟ್ಟಕ್ಕೆ ಸ್ಥಿರವಾದ ಬಲವನ್ನು ಅನುಗ್ರಹಿಸಿದಿಯಲ್ಲಾ.
ಆದರೂ ನೀನು ನಿನ್ನ ಮುಖವನ್ನು ಮರೆಮಾಡಿಕೊಂಡಾಗ ನಾನು ಕಳವಳಗೊಂಡೆನು.
8 ಯೆಹೋವನೇ, ನಿನಗೆ ಮೊರೆಯಿಟ್ಟೆನು; ನನ್ನ ಒಡೆಯನಿಗೆ ಬಿನ್ನವಿಸಿ,

9

<<ನನ್ನನ್ನು ಕೊಂದುಹಾಕಿ ಸಮಾಧಿಗೆ ಸೇರಿಸಿದರೆ ನಿನಗೆ ಲಾಭವೇನು?

ಮಣ್ಣು ನಿನ್ನನ್ನು ಸ್ತುತಿಸುವುದೋ? ಅದು ನಿನ್ನ ನಂಬಿಕೆಯನ್ನು ಹೊಗಳುವುದೇನು?
10 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳಿ ಕರುಣಿಸು;
ಯೆಹೋವನೇ, ನನ್ನ ಸಹಾಯಕ್ಕೆ ಬಾ>> ಎಂದು ಹೇಳಿದೆನು.

11

ಆಗ ನೀನು ನನ್ನ ಗೋಳಾಟವನ್ನು ತಪ್ಪಿಸಿ, ಸಂತೋಷದಿಂದ ಕುಣಿದಾಡುವಂತೆ ಮಾಡಿದಿ;

ನಾನು ಕಟ್ಟಿಕೊಂಡಿದ್ದ ಗೋಣಿತಟ್ಟನ್ನು ತೆಗೆದುಬಿಟ್ಟು,
ಹರ್ಷವಸ್ತ್ರವನ್ನು ನನಗೆ ಧಾರಣೆಮಾಡಿಸಿದಿ.
12 ಇದರಿಂದ ಯೆಹೋವನೇ, ನನ್ನ ಮನಸ್ಸು ಎಡೆಬಿಡದೆ ನಿನ್ನನ್ನು ಕೀರ್ತಿಸುತ್ತಿರುವುದು;
ನನ್ನ ದೇವರೇ, ನಿನ್ನನ್ನು ಸದಾಕಾಲವೂ ಸ್ತುತಿಸುವೆನು.

Copyright information for KanULB